ಮಾಯೆ ಅಂಡ್ ಕಂಪನಿ ಟ್ರೈಲರ್ ಬಿಡುಗಡೆ
Posted date: 10 Tue, Oct 2023 08:59:53 AM
ಕಳೆದ ೩೪ ವರ್ಷಗಳಿಂದ ದೂರದರ್ಶನ ಕೇಂದ್ರದಲ್ಲಿ ಸಂಕಲನಕಾರರಾಗಿ ಕೆಲಸಮಾಡಿ, ಈಗ ನಿವೃತ್ತಿ ಹೊಂದಿರುವ ಎಂ.ಎನ್. ರವೀಂದ್ರರಾವ್ ಅವರು ಮಾತೃಶ್ರೀ ವಿಷನ್ ಸಂಸ್ಥೆಯ ಮೂಲಕ ಚಲನಚಿತ್ರವೊಂದನ್ನು ನಿರ್ಮಾಣ ಮಾಡಿದ್ದಾರೆ.  ಸೋಷಿಯಲ್ ಮೀಡಿಯಾದಿಂದ ಏನೇನೆಲ್ಲ ಅನಾಹುತಗಳು ನಡೆಯುತ್ತಿವೆ, ಅದರಲ್ಲಿ ಜನ ಯಾವರೀತಿ ಮೋಸಹೋಗುತ್ತಿದ್ದಾರೆ ಎಂಬುದರ  ಕುರಿತಾದ ಕಥೆ ಇಟ್ಟುಕೊಂಡು ಮಾಯೆ ಅಂಡ್ ಕಂಪನಿ ಎಂಬ ಚಲನಚಿತ್ರವನ್ನು  ನಿರ್ಮಿಸಿದ್ದು, ಸಂದೀಪ್‌ಕುಮಾರ್  ಈ ಚಿತ್ರಕ್ಕೆ  ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು  ಬರೆದು, ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. 
 
ಸೋಮವಾರ ಸಂಜೆ ಆ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ, ಗಾಯಕ ಶಂಕರ್ ಶಾನುಭೋಗ್, ನಟಿ ಮಾನಸ ಜೋಷಿ ಅವರು ಹಾಜರಿದ್ದು ಚಿತ್ರಕ್ಕೆ ಹಾಗೂ ನಿರ್ಮಾಪಕರಿಗೆ  ಶುಭ ಕೋರಿದರು. ಮಹೇಶ್ ಜೋಷಿ ಮಾತನಾಡಿ ರವೀಂದ್ರ ನನ್ನ ಸಹೋದ್ಯೋಗಿ ಅಲ್ಲದೆ ಹೈಸ್ಕೂಲ್ ಸಹಪಾಠಿ ಕೂಡ. ಇಂದು ಸಿನಿಮಾ ಬರೀ ಮನರಂಜನಾ ಮಾಧ್ಯಮವಾಗಿ ಮಾತ್ರ ಉಳಿದಿದೆ ಎಂದು ಹೇಳಿದರು.
 
ಚಿತ್ರದ ನಿರ್ದೇಶಕ ಸಂದೀಪ್‌ಕುಮಾರ್ ಮಾತನಾಡಿ ನಾನು ಒಂದು ಮದುವೆಗೆ ಹೋದ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ವಿಚಾರ ಬಂತು. ಆಗ ನನಗೆ ಅದರಿಂದ ಏನೇನು ಕ್ರೈಮ್ ಆಗುತ್ತೆ ಅಂತ ಒಂದು ಥಾಟ್ ಹೊಳೆಯಿತು. ಮುಂದೆ ಅದನ್ನೇ ಡೆವಲಪ್ ಮಾಡಿದೆ, ರವೀಂದ್ರರಾವ್ ಅವರು ಒಂದಷ್ಟು ಕಥೆಗಳನ್ನು ಕೇಳಿದ್ದರೂ, ನನ್ನ ಕಥೆ ಇಷ್ಟಪಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾದರು. ಕಳೆದ ಮಾರ್ಚ್ನಲ್ಲಿ ಚಿತ್ರ ಶುರುವಾಗಿತ್ತು. ತುಂಬಾ ಚಾಲೆಂಜಸ್ ಫೇಸ್ ಮಾಡುತ್ತ ಬಂದೆವು. ಮಾಯೆ ಅನ್ನೋದು ಸೋಷಿಯಲ್ ಮೀಡಿಯಾ. ಅದರ ಸುತ್ತ ಒಂದಷ್ಟು ಪಾತ್ರಗಳು ಸುತ್ತುತ್ತ ಹೋಗುತ್ತವೆ.
 
ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ  ಅಪರಾಧಗಳ  ಬಗ್ಗೆ  ಹೇಳುವ  ಈ ಚಿತ್ರವು  ಸಮಾಜಕ್ಕೆ ಒಂದು ಉತ್ತಮ  ಸಂದೇಶವನ್ನು ನೀಡಲಿದೆ.  ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು,   ನಂತರ  ನಿರ್ಮಾಪಕ ರವೀಂದ್ರರಾವ್ ಮಾತನಾಡಿ ನಾನು ದೃಶ್ಯಮಾದ್ಯಮದಲ್ಲಿ ಹೆಚ್ಚು ಕೆಲಸ ಮಾಡಿದವನು. ದೃಶ್ಯ, ಧ್ವನಿ, ಮುದ್ರಣ ಸೇರಿ ಮಹಾಮಾಧ್ಯಮ ಆಗಿದೆ, ಇವತ್ತಿನ ದಿನಗಳಲ್ಲಿ  ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನಿಂದ ಏನೇನೆಲ್ಲ ಅವಘಡಗಳಾಗುತ್ತವೆ, ಅದರಿಂದ ಹೇಗೆ ಹೊರಬರಬಹುದು ಎನ್ನುವುದೇ ಈ ಸಿನಿಮಾ. ಎರಡು ವರ್ಷದಿಂದಲೂ ಒಂದು ಸಿನಿಮಾ ಮೂಲಕ ಸಂದೇಶ ನೀಡಬೇಕೆಂದು ಯೋಚಿಸಿದ್ದೆ. ನನಗೆ ಸಮಾನ ಮನಸ್ಕ  ಸಹನಿರ್ಮಾಪಕರಾಗಿ ಜಿ.ಮೋಹನ್‌ಕುಮಾರ್ ಮತ್ತು ಎಸ್. ನರಸಿಂಹರಾಜು ಅವರು ಕೈಜೋಡಿಸಿದ್ದಾರೆ ಎಂದು ಹೇಳಿದರು. 
 
ಚಿತ್ರದ ಪ್ರಮುಖ ತಾರಾಗಣದಲ್ಲಿ ಅರ್ಜುನ್ ಕಿಶೋರ್‌ಚಂದ್ರ, ಯಶಶ್ರೀ, ಅನುಷಾ ಆನಂದ್, ಯಾಸೀನ್ ಮುಂತಾದವರು ನಟಿಸಿದ್ದಾರೆ. ಚಿತ್ರದ ಹಾಡೊಂದಕ್ಕೆ ಹಿರಿಯ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಸಾಹಿತ್ಯ ರಚಿಸಿದ್ದು,  ಇಂಚರ ಪ್ರವೀಣ್ ಸಂಗೀತ ನೀಡಿದ್ದಾರೆ. ಸಿದ್ದಾರ್ಥ ಅವರ  ಹಿನ್ನೆಲೆ ಸಂಗೀತ, ಲಿಂಗರಾಜ್ ಅವರ ಸಂಕಲನ, ಶಂಕರ್ ಆರಾಧ್ಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ,  ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರವನ್ನೂ ಸಹ ಪಡೆದಿರುವ ಮಾಯೆ ಅಂಡ್ ಕಂಪನಿ ಇದೇತಿಂಗಳ ಕೊನೆಯಲ್ಲಿ ಅಥವಾ ನವೆಂಬರ್ ಮೊದಲವಾರ ಬಿಡುಗಡೆಯಾಗಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed